ಬನಾವಣೆ - ವಂಚನೆಯ ಉದ್ದೇಶದಿಂದ ಪರರೂಪಧಾರಣೆ (ಪರ್ಸೊನೇಷನ್). ಬನಾವಣೆಯ ಮೂಲಕ ವಂಚಿಸುವುದು ಒಂದು ದಂಡನೀಯ ಅಪರಾಧವಾಗುತ್ತದೆ. ಅದು ಎಂಥ ಪರಿಸರ ಹಾಗೂ ಪರಿಸ್ಥಿತಿಗಳಲ್ಲಿ ದಂಡಾರ್ಹ ಅಪರಾಧವಾಗಿ ಪರಿಣಮಿಸುತ್ತದೆಂಬುದನ್ನು ದಂಡ ಸಂಹಿತೆಯ ಹಲವು ಪ್ರಕರಣಗಳಲ್ಲಿ ವಿವೇಚಿಸಲಾಗಿದೆ.

ವಂಚನೆ ಮಾಡುವುದು ಮಾನವನ ಗುಣವಿಶೇಷಗಳಲ್ಲಿ ಒಂದು ಮತ್ತು ಮನುಕುಲದ ಇತಿಹಾಸದಷ್ಟೇ ಪುರಾತನವಾದುದು ಎಂಬುದು ಮನಶಾಸ್ತ್ರಜ್ಞರ ಒಂದು ವಾದವಾಗಿದೆ. ಪ್ರತಿಯೊಂದು ದೇಶದಲ್ಲೂ ಅಲ್ಲಿಯ ಧಾರ್ಮಿಕ ಹಾಗೂ ಸಾಮಾಜಿಕ ವ್ಯವಸ್ಥೆಗಳಲ್ಲಿ ವಂಚನೆಯನ್ನು ಪಾತಕ ಮತ್ತು ಹೀನಕಾರ್ಯ ಎಂದು ಪರಿಗಣಿಸಿರುವುದನ್ನು ಕಾಣಬಹುದಾಗಿದೆ. ವಂಚನೆಯೂ ಮಹಾಪಾತಕಗಳಲ್ಲಿ ಒಂದು ಎಂದು ಹಿಂದೂ ಧರ್ಮಶಾಸ್ತ್ರ ಹೇಳುತ್ತದೆ. ಸಾಮಾಜಿಕ ವ್ಯವಸ್ಥೆಯಲ್ಲಿ ನ್ಯಾಯಸೂತ್ರಗಳ ನಿಯಂತ್ರಣ ಬಲಗೊಳ್ಳುತ್ತ ಬಂದ ಮೇಲೆ ವ್ಯಾವಹಾರಿಕ ಜೀವನದಲ್ಲಿಯ ವಂಚನೆಗಳನ್ನು ನೈತಿಕ ವ್ಯಾಪ್ತಿಯಿಂದಲ್ಲದೆ ನ್ಯಾಯಿಕ ಸೂತ್ರಗಳ ಮೂಲಕ ತಡೆಗಟ್ಟಲು ಕ್ರಮ ಕೈಗೊಳ್ಳಲಾಯಿತು.

ಇಂಗ್ಲೆಂಡ್, ಅಮೆರಿಕ, ಭಾರತ ಮುಂತಾದ ಅನೇಕ ದೇಶಗಳಲ್ಲಿ ಬನಾವಣೆಯನ್ನು ದಂಡನೀಯ ಅಪರಾಧವೆಂದು ಪರಿಗಣಿಸುವ ಕಾನೂನುಗಳು ಆಚರಣೆಯಲ್ಲಿವೆ. ಇಂಗ್ಲೆಂಡಿನಲ್ಲಿ ಸಾಮಾನ್ಯ ನ್ಯಾಯದ ಪ್ರಕಾರ ವಂಚನೆ ಎಂದು ಪರಿಗಣಿಸುವಂಥ ಬನಾವಣೆಯನ್ನು ದಂಡಾರ್ಹ ಅಪರಾಧವೆಂದು ಪರಿಗಣಿಸಲಾಗಿದೆ. ಬನಾವಣೆಯ ಸ್ವರೂಪಕ್ಕೆ ಅನುಗುಣವಾಗಿ ದಂಡನೆಯನ್ನು ನಿಗದಿಗೊಳಿಸಲಾಗಿದೆ, ಚರ, ಸ್ಥಿರ ಆಸ್ತಿ ಅಥವಾ ಹಣವನ್ನು ಮೋಸದಿಂದ ಪಡೆಯುವ ಉದ್ದೇಶ ಹೊಂದಿರುವ ಬನಾವಣೆಯ ಸಂಬಂಧದಲ್ಲಿ ಆಜೀವ ಕಾರಾವಾಸ ಅಥವಾ ಅದಕ್ಕೂ ಕಡಿಮೆಯಾದ ದಂಡನೆಯನ್ನು ವಿಧಿಸಬಹುದಾಗಿದೆ.

ಈ ಬಗ್ಗೆ ಇರುವ ಇಂಗ್ಲಿಷ್ ನ್ಯಾಯಿಕ ಸೂತ್ರಗಳ ಪ್ರಭಾವ ಭಾರತದ ನ್ಯಾಯಿಕ ಸೂತ್ರಗಳ ಮೇಲೆಯೂ ಆಗಿದೆ. ಭಾರತೀಯ ದಂಡಸಂಹಿತೆಯ ಪ್ರಕರಣ 416ರಲ್ಲಿ ಬನಾವಣೆಯ ಮೂಲಕ ವಂಚನೆ ಮಾಡುವ ಅಪರಾಧದ ಸೃಷ್ಟೀಕರಣವಿದೆ. ಮೋಸ ಮಾಡುವ ಉದ್ದೇಶದಿಂದ ತಾನು ಇನ್ನೊಬ್ಬನೆಂದು ನಟನೆ ಮಾಡುವುದು, ಗೊತ್ತಿದ್ದೂ ಒಬ್ಬನ ಸ್ಥಳದಲ್ಲಿ ಮತ್ತೊಬ್ಬನನ್ನು ಪ್ರತಿಸ್ಥಾಪಿಸುವುದು, ಅಥವಾ ಇತರ ಯಾವೊಬ್ಬನನ್ನು ಅವನು ಬೇರೊಬ್ಬನೆಂದು ಗ್ರಹಿಸುವಂತೆ ಮಾಡುವುದು ಇವೇ ಮುಂತಾದವು ಬನಾವಣೆಯ ಮೂಲಕ ವಂಚನೆಯ ಅಪರಾಧಗಳಾಗಿವೆ. ತಾನೊಬ್ಬ ಸಾರ್ವಜನಿಕ ಸೇವಕ ಎಂದು ವಂಚಿಸುವ ಅಪರಾಧ ಬನಾವಣೆಯ ಒಂದು ವಿಶಿಷ್ಟ ರೀತಿಯಾಗಿದೆ. ಇದನ್ನು ಕುರಿತು ದಂಡ ಸಂಹಿತೆಯ ಪ್ರಕರಣ 170ರಲ್ಲಿ ಹೇಳಲಾಗಿದೆ. ಒಬ್ಬ ನೌಕರ ತನ್ನ ಮಾಲೀಕನ ಹೆಸರಿನಲ್ಲಿ ಸ್ಟಾಂಪು ಕಾಗದವನ್ನು ತರಬೇಕಾದ ಪ್ರಸಂಗದಲ್ಲಿ ತಾನೇ ಆ ಮಾಲೀಕನೆಂದು ವರ್ತಿಸಿದಾಗ, ಅಂಥ ವರ್ತನೆ ಬನಾವಣೆಯ ಸ್ವರೂಪ ತಾಳಿದರೂ, ದಂಡಾರ್ಹವಲ್ಲ, ಏಕೆಂದರೆ ಈ ರೀತಿಯ ಬನಾವಣೆಯ ವಂಚನೆಯ ಉದ್ದೇಶವಿಲ್ಲ.

ದಂಡ ಸಂಹಿತೆಯ ಪ್ರಕರಣ 419ರಲ್ಲಿ ಬನಾವಣೆಯ ಅಪರಾಧಕ್ಕಾಗಿ ವಿಧಿಸಬಹುದಾದ ದಂಡವನ್ನು ಕುರಿತು ಹೇಳವಾಗಿದೆ. ಮೂರು ವರ್ಷಗಳ ವರೆಗಿನ ಕಾರಾಗೃಹವಾಸ ಅಥವಾ ದಂಡ ಅಥವಾ ಅವೆರಡನ್ನೂ ವಿಧಿಸಬಹುದಾಗಿದೆ.
(ಎಲ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ